ವಾಟ್ಸನ್, ಜೇಮ್ಸ್ ಡ್ಯೂಯಿ
	1928-. ದೇಹವಿಜ್ಞಾನ ಮತ್ತು ವೈದ್ಯವಿಜ್ಞಾನ ನೊಬೆಲ್ ಪ್ರಶಸ್ತಿ ಪುರಸ್ಕøತ (1962) ಜೀವರಸಾಯನ ವಿಜ್ಞಾನಿ. ಅಮೆರಿಕದ ಶಿಕಾಗೊದಲ್ಲಿ 1928ರಲ್ಲಿ ಜನಿಸಿದ. 15 ವರ್ಷ ವಯಸ್ಸಿಗೆ ಶಿಕಾಗೊ ವಿಶ್ವವಿದ್ಯಾಲಯ ಪ್ರವೇಶಿಸಿದ ಬಾಲಪ್ರತಿಭೆ. 4 ವರ್ಷಾನಂತರ ಪ್ರಾಣಿವಿಜ್ಞಾನ ವಿಷಯದಲ್ಲಿ ಸ್ನಾತಕ ಪದವಿ ಗಳಿಕೆ (1947). ಬಾಲ್ಯದ ಪಕ್ಷಿವೀಕ್ಷಣೆ ಹವ್ಯಾಸ ತಳಿವಿಜ್ಞಾನಾಸಕ್ತಿಯಾಗಿ ಪರಿವರ್ತನೆಯಾದದ್ದು ಈ ಅವಧಿಯಲ್ಲಿಯೇ. ತದನಂತರ ತಳಿವಿಜ್ಞಾನಿ ಹರ್ಮನ್ ಜೋಸೆಫ್ ಮುಲ್ಲರ್ (1890-1967) ಮತ್ತಿತರರಿಂದ ಪ್ರಭಾವಿತನಾಗಿ  ದಿ ಎಫೆಕ್ಟ್ ಆಫ್ ಹಾರ್ಡ್ ಎಕ್ಸ್‍ರೇಸ್ ಆನ್ ಬ್ಯಾಕ್ಟೀರಿಯೊಫ್ಯಾಜ್ ಮಲ್ಟಿಪ್ಲಿಕೇಶನ್  ವಿಷಯದಲ್ಲಿ ಇಂಡಿಯಾನ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಗಳಿಕೆ (1950). (ಬ್ಯಾಕ್ಟೀರಿಯಗಳಿಗೆ ಸೋಂಕುವ ವೈರಸ್‍ಗಳ ಡಿಎನ್‍ಎ ಕುರಿತು ಸೆಪ್ಟೆಂಬರ್ 1950-ಸೆಪ್ಟೆಂಬರ್ 1951 ಅವಧಿಯಲ್ಲಿ ಕೋಪೆನ್‍ಹೇಗನ್‍ನ ನ್ಯಾಶನಲ್ ರಿಸರ್ಚ್ ಕೌನ್ಸಿಲ್‍ನಲ್ಲಿ) ಮೇ 1951ರಲ್ಲಿ ನೇಪಲ್ಸ್‍ನಲ್ಲಿ ಜರುಗಿದ ವಿಚಾರಗೋಷ್ಠಿಯಲ್ಲಿ ಮಾರಿಸ್ ಹಗ್ ಫ್ರೆಡ್ರಿಕ್ ವಿಲ್ಕಿನ್ಸ್‍ನೊಂದಿಗೆ (1916-2004) ಭೇಟಿ ಮತ್ತು ಸ್ಫಟಿಕೀಯ ಡಿಎನ್‍ಎಯ ಎಕ್ಸ್‍ಕಿರಣ ವಿವರ್ತನ ಪ್ರರೂಪ ವೀಕ್ಷಣೆ. ನ್ಯೂಕ್ಲಿಕಾಮ್ಲ ಮತ್ತು ಪ್ರೋಟೀನುಗಳ ಸಂರಚನ ರಸಾಯನವಿಜ್ಞಾನವನ್ನು ತನ್ನ ಸಂಶೋಧನ ಕ್ಷೇತ್ರವಾಗಿ ಆಯ್ದುಕೊಳ್ಳಲು ಉದ್ದೀಪನೆ. ಸಂಶೋಧನೆ ಮಾಡಲು ಆಗಸ್ಟ್ 1951ರಲ್ಲಿ ಕೇಂಬ್ರಿಜ್‍ನ ಕ್ಯಾವೆಂಡಿಶ್ ಪ್ರಯೋಗಾಲಯ ಪ್ರವೇಶ. ಅಲ್ಲಿ ಅದೇ ವರ್ಷ ಇಂಗ್ಲೆಂಡಿನ ಜೀವಭೌತವಿಜ್ಞಾನಿ ಫ್ರಾನ್ಸಿಸ್ ಹ್ಯಾರಿ ಕಾಂಪ್ಟನ್ ಕ್ರಿಕ್‍ನ (1916-2004) ಭೇಟಿ. ಡಿಎನ್‍ಎ ಅಣು ಸಂರಚನೆಯ ರಹಸ್ಯ ಭೇದಿಸುವ ಸಂಶೋಧನೆಯ ಆರಂಭ (1952). ಆನುವಂಶಿಕ ಗುಣಲಕ್ಷಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ಒಯ್ಯುವ ಡಿಎನ್‍ಎ ಅಣು ಸಂರಚನೆಯ ಆವಿಷ್ಕಾರಕ್ಕಾಗಿ ಈ ಮೂವರೂ ನೊಬೆಲ್ ಪ್ರಶಸ್ತಿ ಹಂಚಿಕೊಳ್ಳುವುದಕ್ಕೆ (1962) ಬುನಾದಿ ಸಿದ್ಧವಾದದ್ದು ಹೀಗೆ. 

	ಇಂಗ್ಲೆಂಡಿನ ನಾರ್ತ್‍ಹ್ಯಾಂಪ್ಟನ್‍ನಲ್ಲಿ ಕ್ರಿಕ್ ಜನಿಸಿದ. 18 ವರ್ಷ ವಯಸ್ಸಿಗೆ ಭೌತವಿಜ್ಞಾನ ವಿದ್ಯಾರ್ಥಿಯಾಗಿ ಲಂಡನಿನ ಯೂನಿವರ್ಸಿಟಿ ಕಾಲೇಜಿಗೆ ಸೇರ್ಪಡೆ, ವಿಜ್ಞಾನ ಸ್ನಾತಕ ಪದವಿ ಗಳಿಕೆ (1937). ಸಂಶೋಧನೆಯ ಆರಂಭ, ಮಹಾ ಯುದ್ಧಾರಂಭದಿಂದಾಗಿ ವ್ಯಾಸಂಗ ಸ್ಥಗಿತ (1939). ಕಾಂತೀಯ ಮತ್ತು ಧ್ವನಿಕ (ಅಕೌಸ್ಟಿಕ್) ನೆಲಸ್ಫೋಟಕ (ಲ್ಯಾಂಡ್‍ಮೈನ್) ಸಂಬಂಧಿತ ವಿಜ್ಞಾನಿಯಾಗಿ ನೌಕಾಪಡೆಯಲ್ಲಿ ಕಾರ್ಯನಿರ್ವಹಣೆ. ಯುದ್ಧಾನಂತರ ಕೇಂಬ್ರಿಜ್‍ನ ಸ್ಟ್ರೇಂಜ್‍ವೇಸ್ ಪ್ರಯೋಗಾಲಯದಲ್ಲಿ ಪಿಎಚ್.ಡಿ. ಪದವಿ ಗಳಿಕೆಗಾಗಿ ಜೀವವಿಜ್ಞಾನ ಕ್ಷೇತ್ರದಲ್ಲಿ ಈ ಭೌತವಿಜ್ಞಾನ ಸ್ನಾತಕನ ಸಂಶೋಧನೆಯ ಆರಂಭ (1947). ಸಂಶೋಧನ ವಿಷಯ: ಕೃಷಿಕೆ ಮಾಡಿದ (ಕಲ್ಚರ್ಡ್) ಫೈಬ್ರೊ ಬ್ಲಾಸ್ಟ್ ಕೋಶಗಳಲ್ಲಿ ಕೋಶದ್ರವ್ಯದ ಭೌತಲಕ್ಷಣಗಳು. ಎರಡು ವರ್ಷಾ ನಂತರ ಕ್ಯಾವೆಂಡಿಶ್ ಪ್ರಯೋಗಾಲಯದ ವೈದ್ಯಕೀಯ ಸಂಶೋಧನ ವಿಭಾಗಕ್ಕೆ ಸೇರ್ಪಡೆ (1949). ಎಕ್ಸ್‍ರೇ ಡಿಫ್ರ್ಯಾಕ್ಷನ್: ಪಾಲಿಪೆಪ್ಟೈಡ್ಸ್ ಆಂಡ್ ಪ್ರೋಟೀನ್ಸ್ ವಿಷಯ ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿ ಗಳಿಕೆ (1954). ಈ ಅವಧಿಯಲ್ಲಿ ವಾಟ್ಸನ್‍ನ ಭೇಟಿ (1951). ಸಮಾನಾಸಕ್ತಿಯ  ತಳಹದಿಯ ಮೇಲೆ ಎಕ್ಸ್‍ಕಿರಣ ವಿವರ್ತನ ಪರಿಣತ ಕ್ರಿಕ್ ಮತ್ತು ಬ್ಯಾಕ್ಟೀರಿಯ ತಳಿವಿಜ್ಞಾನ ಪರಿಣತ ವಾಟ್ಸನ್‍ರ  ಮಿತ್ರತ್ವ ರೂಪುಗೊಂಡುದರ ಫಲಿತವೇ  ಡಿಎನ್‍ಎ ಸಂರಚನೆಯ ದ್ವಿಸುರುಳಿ (ಡಬಲ್ ಹೆಲಿಕ್ಸ್) ಪ್ರಸ್ತಾವನೆ ಮತ್ತು ಅದರ ಯಥಾಪ್ರತಿ ಸೃಷ್ಟಿ ವಿಧಾನದ ನಿರೂಪಣೆ (1953). ವಿಲ್ಕಿನ್ಸ್‍ನ ಅಧ್ಯಯನಗಳು ಸಂಗ್ರಹಿಸಿದ್ದ  ಭೌತ ಮತ್ತು ಎರ್ವಿನ್ ಚಾರ್ಗಾಫ್ (1905-2002) ಸಂಗ್ರಹಿಸಿದ್ದ ರಾಸಾಯನಿಕ ಮಾಹಿತಿಗಳನ್ನು ಆಧರಿಸಿ ವಾಟ್ಸನ್ ಮತ್ತು ಕ್ರಿಕ್ ಈ ಸಿದ್ಧಾಂತ ರೂಪಿಸಿದ್ದರು. ಸುರುಳಿಯಾಗಿ ತಿರುಚಿದ ಏಣಿಯಂತಿದ್ದ ಈ ಮಾದರಿಯಲ್ಲಿ ಪ್ರತ್ಯಾಮ್ಲಗಳ ಮೆಟ್ಟಿಲುಗಳಿಂದ ಹೆಣೆದಿರುವ ಸಕ್ಕರೆಫಾಸ್ಫೇ ಟುಗಳ ಎರಡು ಎಳೆಗಳಿದ್ದುವು. ಪ್ರತ್ಯಾಮ್ಲಗಳ ಪೈಕಿ ಒಂದು ಎಳೆಯ ಗ್ವಾನೀನ್ ಮತ್ತೊಂದರ ಸೈಟೊಸೀನ್‍ಗೂ ಒಂದರ ಅಡೆನೀನ್ ಮತ್ತೊಂದರ ಥೈಮೀನ್‍ಗೂ ಜೋಡಣೆ ಆಗಿರುವುದರಿಂದ ದ್ವಿಸುರುಳಿಯ ಅಗಲ ಏಕರೂಪವಾಗಿರುತ್ತದೆ. ಕೋಶ ವಿಭಜನೆ ಆಗುವಾಗ ಎಳೆಗಳು ಬೇರ್ಪಡುತ್ತವೆ. ಪ್ರತಿಯೊಂದು ಎಳೆಯೂ ಮತ್ತೊಂದು ಎಳೆ ರೂಪುಗೊ ಳ್ಳುವುದಕ್ಕೆ ಬೇಕಾದ ಪ್ರರೂಪವನ್ನು ಒದಗಿಸುತ್ತದೆ. ಈ ಪ್ರಕ್ರಿಯೆಯಿಂದ ಜೀನ್ ಮತ್ತು ಕ್ರೋಮೊಸೋಮುಗಳು ದ್ವಿಪ್ರತಿಗೊಳ್ಳುತ್ತವೆ. ಇದು ನೇಚರ್ ಪತ್ರಿಕೆಯಲ್ಲಿ (1953 ಎಪ್ರಿಲ್ 25) ಪ್ರಕಟವಾದ ಈ ಸಿದ್ಧಾಂತದ ತಿರುಳು. ತದನಂತರ ವಿಲ್ಕಿನ್ಸ್ ಮಾಡಿದ ಎಕ್ಸ್‍ಕಿರಣ ವಿವರ್ತನ ಅಧ್ಯಯನಗಳು (1960, 1962) ಈ ಪ್ರಸ್ತಾವನೆಯನ್ನು ದೃಢೀಕರಿಸುವ ಮಾಹಿತಿ ಒದಗಿಸಿದುವು. ಎಂದೇ, ವಾಟ್ಸನ್, ಕ್ರಿಕ್ ಮತ್ತು ವಿಲ್ಕಿನ್ಸ್ ಮೂವರಿಗೂ 1962ರ ದೇಹವಿಜ್ಞಾನ ಮತ್ತು ವೈದ್ಯ ವಿಜ್ಞಾನ ನೊಬೆಲ್ ಪ್ರಶಸ್ತಿ ಲಭಿಸಿತು.

	ಡಿಎನ್‍ಎಯ ದ್ವಿಸುರುಳಿ ಮಾದರಿಯ ಆವಿಷ್ಕಾರಾನಂತರ ವಾಟ್ಸನ್ ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜೀವವಿಜ್ಞಾನ ದ ಸೀನಿಯರ್ ರಿಸರ್ಚ್ ಫೆಲೊ ಆಗಿ (1953-55) ಅಲೆಕ್ಸಾಂಡರ್ ರಿಚ್‍ನ ಜೊತೆಗೂಡಿ ಆರ್‍ಎನ್‍ಎಯ ಎಕ್ಸ್‍ಕಿರಣ ವಿವರ್ತನ ಅಧ್ಯಯನ ಮಾಡಿದ. ಮುಂದೆ ಕ್ಯಾವೆಂಡಿಶ್ ಪ್ರಯೋಗಾಲಯಕ್ಕೆ ಹಿಂತಿರುಗಿ ಕ್ರಿಕ್‍ನ ಜೊತೆಗೂಡಿ ಸಂಶೋಧನೆಗಳಲ್ಲಿ ಮಗ್ನನಾದ. ಇವರು ಈ ಅವಧಿಯಲ್ಲಿ ಚಿಕ್ಕ ವೈರಸ್‍ಗಳ ಸಂರಚನೆಯ ಸಾರ್ವತ್ರಿಕ ಸಿದ್ಧಾಂತ ಮಂಡಿಸಿದರು. ತದನಂತರ ಅಧ್ಯಾಪಕನಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗ ಸೇರಿದ ವಾಟ್ಸನ್ ಅಸಿಸ್ಟೆಂಟ್ ಪ್ರೊಫೆಸರ್ (1956), ಅಸೋಸಿಯೇಟ್ ಪ್ರೊಫೆಸರ್ (1958), ಪ್ರೊಫೆಸರ್ (1961) ಆಗಿ ಸೇವೆ ಸಲ್ಲಿಸಿದ (1956-76). ಈ ಅವಧಿಯಲ್ಲಿ ಈತನ ಸಂಶೋಧನೆಗಳ ವಿಷಯ: ರೋಲ್ ಆಫ್ ಆರ್‍ಎನ್‍ಎ ಇನ್ ಪ್ರೋಟೀನ್ ಸಿಂತೆಸಿಸ್. ಈ ಸಂಶೋಧನೆಗಳ ಫಲಿತವೇ ಸಂದೇಶವಾಹಕ (ಮೆಸೆಂಜರ್) ಆರ್‍ಎನ್‍ಎ ಪರಿಕಲ್ಪನೆಯನ್ನು ಬೆಂಬಲಿಸುವ ಬಹುತೇಕ ಪ್ರಾಯೋಗಿಕ ಪುರಾವೆಗಳು. ಹಾರ್ವರ್ಡಿನಲ್ಲಿ ಇರುವಾಗಲೇ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದ ಲಾಂಗ್ ಐಲ್ಯಾಂಡಿನ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯದ ನಿರ್ದೇಶಕನಾಗಿ ಅದನ್ನು ಬಲಪಡಿಸಿದ. ಇತ್ತ ಹಾರ್ವರ್ಡ್ ಹುದ್ದೆಗೆ ರಾಜಿನಾಮೆ ನೀಡಿ ಹಾರ್ಬರ್ ಪ್ರಯೋಗಾಲಯದ ಪೂರ್ಣಕಾಲಿಕ ನಿರ್ದೇಶಕನಾದ (1976). ಪ್ರಸ್ತುತ ಅದು ತಳಿವಿಜ್ಞಾನ ಸಂಶೋಧನೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸಂಸ್ಥೆ. ವಾಟ್ಸನ್‍ನ ಮಾರ್ಗದರ್ಶನದಲ್ಲಿ ಅಲ್ಲಿಯ ವಿಜ್ಞಾನಿಗಳು ಕ್ಯಾನ್ಸರಿನ ಅಣು ಸ್ವರೂಪವನ್ನು ಪತ್ತೆಹಚ್ಚಿ ಕ್ಯಾನ್ಸರ್‍ಕಾರಕ ಜೀನ್‍ಗಳನ್ನು ಗುರುತಿಸಿದರು. ಮಾನವ ಜೀನೋಮ್ ಯೋಜನೆಯ ಸಹಾಯಕ ನಿರ್ದೇಶಕನಾಗುವಂತೆ ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್ ನೀಡಿದ ಆಹ್ವಾನವನ್ನು ಸ್ವೀಕರಿಸಿದ (1988), ಮುಂದೆ ಅದರ ನಿರ್ದೇಶಕನೂ ಆದ (1989). ವಿವಾದಗಳನ್ನು ಹುಟ್ಟುಹಾಕಿದ ಈ ಯೋಜನೆಯನ್ನು ಸಮರ್ಥವಾಗಿ ದಿಗ್ದರ್ಶಿಸಿದ. ಈ ಹುದ್ದೆಗೆ ರಾಜಿನಾಮೆ ನೀಡಿ (1992) ಪುನಃ ಲಾಂಗ್ ಐಲ್ಯಾಂಡ್ ಪ್ರಯೋಗಾಲಯಕ್ಕೆ ಹಿಂತಿರುಗಿದ (1992), ಆ ಸಂಸ್ಥೆಯ ಅಧ್ಯಕ್ಷನೂ ಆದ (1994). ಈ ಪ್ರಯೋಗಾಲಯ ಕ್ಯಾನ್ಸರ್, ಸಸ್ಯಅಣುಜೀವವಿಜ್ಞಾನ, ಕೋಶಜೀವರಸಾಯನವಿಜ್ಞಾನ ಮತ್ತು ನರವಿಜ್ಞಾನ ಕ್ಷೇತ್ರಗಳಲ್ಲಿ ಅತ್ಯುನ್ನತ ಮಟ್ಟದ ಸಂಶೋಧನೆಗಳಲ್ಲಿ ನಿರತವಾಗಿರುವುದಲ್ಲದೆ ಡಿಎನ್‍ಎ ವಿಜ್ಞಾನದಲ್ಲಿ ಸ್ನಾತಕೋತ್ತರ ವಿಶ್ವವಿದ್ಯಾಲಯವಾಗಿಯೂ ಕಾರ್ಯನಿರ್ವಹಿಸುತ್ತಿದೆ.

	ಈ ಮೇಧಾವಿ ವಿಜ್ಞಾನಿಗೆ ಅನೇಕ ಪುರಸ್ಕಾರಗಳು, ಗೌರವ ಸದಸ್ಯತ್ವಗಳು, ಗೌರವ ಪದವಿಗಳು  ಲಭಿಸಿವೆ. ಡಿಎನ್‍ಎ ಆವಿಷ್ಕಾರದ ಕಥೆ ದಿ ಡಬಲ್ ಹೆಲಿಕ್ಸ್ ಸಹೋದ್ಯೋಗಿಗಳನ್ನು ಕೀಳಾಗಿ ಚಿತ್ರಿಸಿದೆ ಎಂಬ ವಿವಾದ ಹುಟ್ಟುಹಾಕಿದ ಜನಪ್ರಿಯ ಪುಸ್ತಕ ಈತನ ಮೊದಲನೆಯ ಕೃತಿ (1968). ಮಾಲೆಕ್ಯುಲರ್ ಬಯಾಲಜಿ ಆಫ್ ದಿ ಜೀನ್ (1968), ಮಾಲೆಕ್ಯುಲರ್ ಬಯಾಲಜಿ ಆಫ್ ದಿ ಸೆಲ್, ರೀಕಂಬೈನೆಂಟ್ ಡಿಎನ್‍ಎ-ಎ ಶಾರ್ಟ್ ಕೋರ್ಸ್, ದಿ ಡಿಎನ್‍ಎ ಸ್ಟೋರಿ (1981) ಮತ್ತು ಜೀನ್ಸ್, ಗಲ್ರ್ಸ್ ಅ್ಯಂಡ್ ಗ್ಯಾಮೊ (2003)-ಇವು ಇವನ ಇತರ ಕೃತಿಗಳು.

 	ಡಿಎನ್‍ಎಯ ದ್ವಿಸುರುಳಿ ಮಾದರಿಯ ಆವಿಷ್ಕಾರಾನಂತರ ಕ್ರಿಕ್ ಡಿಎನ್‍ಎಗೂ ಜೆನೆಟಿಕ್ ಸಂಕೇತಕ್ಕೂ ನಡುವಿನ ಸಂಬಂಧ ಪತ್ತೆಹಚ್ಚುವ ಕಾರ್ಯದಲ್ಲಿ ನಿರತನಾದ. ವರ್ನಾನ್ ಇನ್‍ಗ್ರಾಮ್‍ನ ಜೊತೆಗೂಡಿ (ಜನನ 1924) ಪ್ರೋಟೀನುಗಳ ನಿರ್ದಿಷ್ಟತೆ ನಿರ್ಧರಿಸುವುದರಲ್ಲಿ ಜೆನೆಟಿಕ್ ಸಾಮಗ್ರಿಯ ಪಾತ್ರ ಆವಿಷ್ಕರಿಸಿದ. ಸಿಡ್ನಿ ಬ್ರೆನ್ನರ್‍ನೊಡಗೂಡಿ (ಜನನ 1927) ಪ್ರೋಟೀನುಗಳಲ್ಲಿ ಅಮೈನೊಆಮ್ಲಗಳ ಶ್ರೇಣಿಗೂ ಡಿಎನ್‍ಎಯ ಪ್ರತ್ಯಾಮ್ಲಗಳ ಶ್ರೇಣಿಗೂ ನಡುವಿನ ಸಂಬಂಧವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತನಾದ (1957). ಮೂಲ ಜೆನೆಟಿಕ್ ಸಂಕೇತದ ತಿಳಿವಳಿಕೆ, ಪ್ರೋಟೀನುಗಳ ಸಂಶ್ಲೇಷಣೆ-ಈ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಗೆ ಈ ಅಧ್ಯಯನಗಳ ಕೊಡುಗೆ ಅಪಾರ. ತದನಂತರ ಹಿಸ್ಟೋನ್ ಗಳು ಎಂಬ ಕ್ರೋಮೊಸೋಮ್ ಸಂಬಂಧಿತ ಪ್ರೋಟೀನುಗಳ ಕಾರ್ಯ ಮತ್ತು ಸಂರಚನೆಯ ಅಧ್ಯಯನ ಆರಂಭಿಸಿದ (1960). ಅಂತಿಮವಾಗಿ ಸ್ಯಾನ್ ಡಿಯಾಗೊದಲ್ಲಿರುವ ಸಾಲ್ಕ್ ಇನ್‍ಸ್ಟಿಟ್ಯೂಟ್ ಫಾರ್ ಬಯಲಾಜಿಕಲ್ ಸ್ಟಡೀಸ್ ಸಂಸ್ಥೆಯಲ್ಲಿ ವಿಶೇಷ ಪ್ರಾಧ್ಯಾಪಕನಾದ (1976). ಈತನಿಗೆ ಅನೇಕ ಪುರಸ್ಕಾರಗಳು, ಗೌರವ ಸದಸ್ಯತ್ವಗಳು ಲಭಿಸಿವೆ. ಆಫ್ ಮಾಲೆಕ್ಯೂಲ್ಸ್ ಅ್ಯಂಡ್ ಮೆನ್ (1966), ಲೈಫ್ ಇಟ್‍ಸೆಲ್ಫ್ (1981), ವಾಟ್ ಎ ಮ್ಯಾಡ್ ಪಸ್ರ್ಯೂಟ್: ಎ ಪರ್ಸನಲ್ ವ್ಯೂ ಆಫ್ ಸೈಂಟಿಫಿಕ್ ಡಿಸ್ಕವರಿ, (1988) ಮತ್ತು ದಿ ಅಸ್ಟಾನಿಷಿಂಗ್ ಹೈಪಾತಿಸಿಸ್: ಸೈಂಟಿಫಿಕ್ ಸರ್ಚ್ ಫಾರ್ ದಿ ಸೋಲ್ (1994) ಈತನ ಕೃತಿಗಳು. ಈತನ ನಿವಾಸದ ಹೆಸರು ಗೋಲ್ಡನ್ ಹೆಲಿಕ್ಸ್ ಮತ್ತು ಹವ್ಯಾಸ, ಮಿತ್ರರೊಂದಿಗೆ ಹರಟುವುದು!

												(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ